ಉತ್ತರಾಖಂಡದಲ್ಲಿ ಭೀಕರ ಹೆಲಿಕಾಪ್ಟರ್ ದುರಂತ: ದೆಹಲಿಯ ಪೈಲಟ್, ಬೆಂಗಳೂರಿನ ಪೊಲೀಸ್ ಮತ್ತು ವಕೀಲ ಸೇರಿ 6 ಮಂದಿ ಸಾವು

 

 

ಜೋಶಿಮಠ: ಉತ್ತರಾಖಂಡದ ಜೋಶಿಮಠದಲ್ಲಿ ಶುಕ್ರವಾರ ಭೀಕರ ಹೆಲಿಕಾಪ್ಟರ್ ಅಪಘಾತ ಸಂಭವಿಸಿದ್ದು, ಹೆಲಿಕಾಪ್ಟರ್‌ನಲ್ಲಿದ್ದ ಆರು ಮಂದಿ ಮೃತಪಟ್ಟಿದ್ದಾರೆ. ಬದರಿನಾಥದಿಂದ ಡೆಹ್ರಾಡೂನ್‌ಗೆ ತೆರಳುತ್ತಿದ್ದ ಹೆಲಿಕಾಪ್ಟರ್ ಮಾರ್ಗಮಧ್ಯೆ ಪತನಗೊಂಡಿದೆ.

 

ಹೆಲಿಕಾಪ್ಟರ್ ನಾಪತ್ತೆಯಾದ ಬಗ್ಗೆ ಆರಂಭದಲ್ಲಿ ಮಾಹಿತಿ ಲಭ್ಯವಾಗಿತ್ತು. ತಕ್ಷಣ ಜಿಲ್ಲಾಡಳಿತ ಶೋಧ ಕಾರ್ಯಾಚರಣೆ ಆರಂಭಿಸಿತು. ವೈಮಾನಿಕ ಶೋಧ ತಂಡಗಳನ್ನು ನಿಯೋಜಿಸಲಾಗಿತ್ತು. ಈ ವೇಳೆ ಚೈಯೇನ್ ಗ್ರಾಮದ ಸಮೀಪ ಹೊಗೆ ಕಾಣಿಸಿಕೊಂಡಿದ್ದು, ಅಪಘಾತ ಸಂಭವಿಸಿರುವುದು ಪತ್ತೆಯಾಗಿದೆ.

 

ಮೃತರಲ್ಲಿ ಐವರು ಬೆಂಗಳೂರಿನ ನಿವಾಸಿಗಳಾಗಿದ್ದು, ಒಬ್ಬರು ದೆಹಲಿಯ ಪೈಲಟ್ ಆಗಿದ್ದಾರೆ.

 

ಮೃತ ಪೈಲಟ್‌ನನ್ನು 48 ವರ್ಷದ ಹಿಮಾಂಶು ಸಬರ್ವಾಲ್ ಎಂದು ಗುರುತಿಸಲಾಗಿದೆ. ಇವರು ಪಶ್ಚಿಮ ದೆಹಲಿಯ ಶಾಲಿಮಾರ್ ಬಾಗ್ ನಿವಾಸಿಯಾಗಿದ್ದರು.

 

ಇನ್ನು ಬೆಂಗಳೂರಿನ ನಿವಾಸಿಗಳಾದ 41 ವರ್ಷದ ಪ್ರತಾಪ್ ಬಿ. ನಿಂಗ್ರಾಜು, 44 ವರ್ಷದ ಅರುಣ್ ಸಾಲುಂಕೆ, 49 ವರ್ಷದ ಸುಧೀರ್ ಕೆ., 51 ವರ್ಷದ ಎಚ್.ಎಸ್. ನಟರಾಜ್ ಹಾಗೂ 39 ವರ್ಷದ ಶಂಕರ್ ಗೌಡ ವಿ.ಬಿ. ಮೃತಪಟ್ಟ ಪ್ರಯಾಣಿಕರಾಗಿದ್ದಾರೆ.

 

ಮೃತ ಅರುಣ್ ಸಾಲುಂಕೆ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಶಂಕರ್ ಗೌಡ ವೃತ್ತಿಯಲ್ಲಿ ವಕೀಲರಾಗಿದ್ದರು. ಉಳಿದವರ ಬಗ್ಗೆ ಹೆಚ್ಚಿನ ಮಾಹಿತಿ ತಕ್ಷಣಕ್ಕೆ ಲಭ್ಯವಾಗಿಲ್ಲ.

 

ಈ ಭೀಕರ ದುರಂತದಿಂದ ಆರು ಕುಟುಂಬಗಳಲ್ಲಿ ಶೋಕ ಮಡುಗಟ್ಟಿದ್ದು, ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

7k network